ಪ್ರವಾಸ/ಕಾಲೇಜ್ ಕ್ಯಾಂಪಸ್

ನಮ್ಮ ವಿಶ್ವವಿದ್ಯಾಲಯದ ಶಿಲ್ಪೋದ್ಯಾನದಲ್ಲಿ ಮಹಿಳಾ ಸಾಧಕಿಯರು!

ದೀಪಾ ಮಂಜರಗಿ

ವಿಜಯಪುರ :- ಬಿಸಿಲಿನ ನಾಡು ಎಂದು ಕರೆಸಿಕೊಳ್ಳುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣ ನೊಡುತ್ತಿದ್ದರೆ ಇದು ವಿಶ್ವವಿದ್ಯಾಲಯವೇ ಅಥವಾ ಪ್ರವಾಸಿತಾಣವೇ ಅನುವಷ್ಟರ ಮಟ್ಟಿಗೆ ವಿಶ್ವವಿದ್ಯಾಲಯ ಇಂದು ನೋಡುಗರ ಗಮನ ಸೆಳೆಯುತ್ತಿದೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು 2003ರಲ್ಲಿ ವಿಜಯಪುರ ನಗರದಲ್ಲಿ ಸ್ಥಾಪನೆಯಾಗಿದ್ದು ಇದು ಮಹಿಳೆಯರಿಗೆ ಶಿಕ್ಷಣ ನೀಡುವುದರೊಂದಿಗೆ ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದೆ. ಅಥಣಿಗೆ ಹೋಗುವ ರಸ್ತೆಯಲ್ಲಿ 100 ಎಕರೆ ಕ್ಯಾಂಪಸ್ ಹೊಂದಿದೆ. ರಾಜ್ಯದ ವಿವಿಧ ಭಾಗಗಳ ಮಹಿಳಾ ವಿದ್ಯಾರ್ಥಿನಿಯರು ಇಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ನಮ್ಮ ವಿಶ್ವವಿದ್ಯಾಲಯವು ದಿನದಿಂದ ದಿನಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದುತಿದೆ. ಒಂದು ಕಾಡಿನಲ್ಲಿ ಮೂರು ಬಂಡೆ ಕಲ್ಲುಗಳು ಇರುತ್ತವೆ. ಅಲ್ಲಿಗೆ ಶಿಲ್ಪಿಯೊಬ್ಬ ಬಂದು ಮೂರು ಕಲ್ಲುಗಳನ್ನು ಎತ್ತಿಕೊಂಡು ಒಂದೆಡೆ ಇಡುತ್ತಾನೆ. ಮೊದಲನೇ ಕಲ್ಲನ್ನು ಶಿಲ್ಪಿಯು ಕೆತ್ತುವಾಗ ನೋವನ್ನು ಸಹಿಸಲಾಗದೇ ಹೋಯಿತು. ಆಗ ಮೂರ್ತಿಯನ್ನು ಕೆತ್ತಲು ಅದರಲ್ಲಿ ಆಗಲಿಲ್ಲ. ಎರಡನೇ ಕಲ್ಲನ್ನು ಕೆತ್ತುವಾಗ ಅರ್ಧ ಸಮಯದವರೆಗೂ ಸಹಿಸಿಕೊಂಡಿದ್ದ ಕಲ್ಲಿಗೆ ಮುಂದೆ ಸಹಿಸಲಾಗಲಿಲ್ಲ. ಕೊನೆಯ ಹಾಗೂ ಮೂರನೇ ಕಲ್ಲನ್ನು ಶಿಲ್ಪಿ ಕೈಗೆತ್ತಿಕೊಂಡು ಕೆತ್ತಲು ಶುರು ಮಾಡಿದ. ಈ ಕಲ್ಲು ಕೆತ್ತನೆ ಪೂರ್ತಿಯಾಗುವವರೆಗೆ ಶಾಂತ ರೀತಿಯಿಂದ ಎಲ್ಲ ಉಳಿ ಪೆಟ್ಟುಗಳನ್ನು ಸಹಿಸಿಕೊಂಡು ಸುಮ್ಮನೇ ಇತ್ತು. ಕೊನೆಗೆ ಈ ಕಲ್ಲು ಸರ್ವರೂ ಪೂಜಿಸಲ್ಪಡುವ ದೇವರ ಮೂರ್ತಿಯಾಗಿ ಗರ್ಭಗುಡಿಗೆ ಸೇರಿತು. ಅರ್ಧ ನೋವು ಸಹಿಸಿದ್ದ ಎರಡನೇ ಕಲ್ಲು ದ್ವಾರ ಬಾಗಿಲಿನ ಬಳಿ ಉಪಯೋಗಿಸಲ್ಪಟ್ಟಿತು. ಆದರೆ ಅದಕ್ಕೆ ಪೂಜೆ ಸಿಗಲಿಲ್ಲ. ಮೊದಲ ಕಲ್ಲು ಅಂದರೆ ದೇವಸ್ಥಾನದ ಹೊರಗೆ ಚಪ್ಪಲಿ ಬಿಡುವ ಸ್ಥಳದಲ್ಲಿ ಇತ್ತು. ಜನರು ಅದನ್ನು ನೋಡುತ್ತಲೂ ಇರಲಿಲ್ಲ, ಇತ್ತ ಪೂಜಿಸುತ್ತಲೂ ಇರಲಿಲ್ಲ. ಕಾಲು ಒರೆಸಿಕೊಂಡು ಮುಂದೆ ಹೋಗುತ್ತಿದ್ದರು.


ಈ ಕಥೆಯ ನೀತಿ ಏನೆಂದರೆ, ಜೀವನದಲ್ಲಿ ನಾವು ಕಲ್ಲುಗಳಿದ್ದಂತೆ, ಕಷ್ಟಗಳ ಸಮಯ, ಸಂದರ್ಭ ಮತ್ತು ಸನ್ನಿವೇಶಗಳು ಉಳಿಪೆಟ್ಟುಗಳಿದ್ದಂತೆ. ಅವುಗಳನ್ನು ಸಹಿಸಿಕೊಂಡರೆ ಮುಂದೆ ಭವಿಷ್ಯದಲ್ಲಿ ಜನ ಮೆಚ್ಚುವ ಉತ್ತಮ ನಾಗರಿಕರಾಗಿ ಸಾಧನೆಯ ಶಿಖರವನ್ನೇರಬಹುದು. ಕಷ್ಟವನ್ನು ಎದುರಿಸದವರು ಎಲ್ಲರಿಗಿಂತ ಬದುಕಿನಲ್ಲಿ ಇದ್ದೂ ಇಲ್ಲದಂತೆ, ಯಾರೂ ಗುರುತಿಸದಂತೆ ಗೌಣವಾಗುತ್ತಾರೆ.
ಕಲ್ಲು ಎಂದು ಹೀಗಳೆಯುವರು ಅನೇಕರು, ಕಲ್ಲನ್ನು ಪೂಜಿಸುವರು ಮತ್ತನೇಕರು, ಕಲ್ಲು ಕೆಲವರ ಬದುಕಿನ ಆಧಾರ. ಕಲ್ಲು ಕಲಾವಿದನಿಗೆ ಅವನ ಬೇಕು-ಬೇಡಗಳನ್ನು ಈಡೇರಿಸಲು ಸಹಾಯವಾಗುವ ಮೂಲ. ಆದ್ದರಿಂದ ಶಿಲ್ಪ ಕಲಾಕಾರರಿಗೆ ಕಲೆಯೇ ಬಾಳಿನ ಬೆಳಕು. ಕಲೆಯೇ ಅವನ ಬಾಳಿಗೆ ಬೆಲೆ ತಂದು ಕೊಡುವುದು. ಈ ಕಥೆ ಕಲ್ಲಿನಲ್ಲಿ ಕಲೆಯನ್ನು ಮೂಡಿಸುವ ಕಲೆಗಾರರ ಬಗ್ಗೆ ಅಷ್ಟೇ ಅಲ್ಲ, ಬದಲಿಗೆ ಈ ಶಿಲ್ಪಿಯ ಕೈಯಲ್ಲಿ ಶಿಲೆಯಾಗುವ ಸಾಧಕರ ಬಗ್ಗೆಯೂ ಕೂಡ.


ಈ ಕಥೆಯನ್ನು ಹೇಳಲು ಕಾರಣ ಜೀವನವೆಂಬ ಈ ಸಮರದಲ್ಲಿ ಸಮಾಜದಿಂದ ಹೆಜ್ಜೆ ಹೆಜ್ಜೆಗೂ ಶೋಷಣೆಗೆ ಒಳಗಾಗಿ, ಜೀವನದಲ್ಲಿ ಎದುರಾಗುವ ಎಲ್ಲ ಕಷ್ಡ-ಸಂಕೋಲೆಗಳನ್ನು ಮೀರಿ ಅತ್ಯುನ್ನತ ಮಟ್ಟಕ್ಕೆ ಏರಿ ತಿರಸ್ಕರಿಸಿದ ಸಮಾಜದಲ್ಲಿಯೇ ಪುರಸ್ಕಾರ ಪಡೆದು ಮಹಿಳಾ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಮಹಿಳಾ ಸಾಧಕಿಯರ ಕುರಿತು. ಅವರ ಈ ಸಾಧನೆಯನ್ನು ಕೇವಲ ಪುಸ್ತಕಕ್ಕೆ ಅಥವಾ ಜಯಂತಿ ಆಚರಣೆಗಳಿಗೆ ಮೀಸಲಾಗಿಡದೆ ಇನ್ನುಳಿದ ಎಲ್ಲ ಮಹಿಳೆಯರಿಗೆ ಮಾದರಿಯನ್ನಾಗಿ ಮಾಡಲು ಹೊರಟಿರುವ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಹೆಮ್ಮೆಯ ಕಾರ್ಯದ ಕುರಿತು.


ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಇತ್ತಿಚೆಗಷ್ಟೇ ನಾಮಕರಣ ಮಾಡಲಾಯಿತು. ಮಹಿಳಾ ವಿವಿಯು ಅಥಣಿ ರಸ್ತೆಯ ಜ್ಞಾನಶಕ್ತಿ ಆವರಣದಲ್ಲಿದೆ. ಮೊದಲೆಲ್ಲ ವಿವಿಯಲ್ಲಿ ಎಲ್ಲಿ ನೋಡಿದರೂ ಮರಭೂಮಿಯೇ ಕಾಣಿಸುತ್ತಿತ್ತು. ಹೊರಗಿನಿಂದ ಬರುವವರರಿಗೆ ಕಣ್ಣಿಗೆ ಆಹ್ಲಾದಕರವಾಗುವ ಯಾವ ನೋಟವೂ ಕಾಣಸಿಗುತ್ತಿರಲಿಲ್ಲ.


ಆದರೆ ಈಗ ಒಮ್ಮೆ ಮಹಿಳಾ ವಿವಿಯ ಆವರಣದಲ್ಲಿ ಕಾಲಿಟ್ಟರೆ ಮತ್ತೆ ಹೊರಗೆ ಹೋಗಲೂ ಮನಸ್ಸಾಗುವುದಿಲ್ಲ. ಅಂದರೆ ಮಹಿಳಾ ವಿವಿ ಮುಖ್ಯದ್ವಾರಕ್ಕೆ ನೀವು ಬಂದರೆ ಮಹಿಳೆಯರ ಹಲವಾರು ಶಿಲ್ಪವಿನ್ಯಾಸಗಳು, ಅದ್ಭುತ ಕಲಾಕೃತಿಗಳು ನಿಮ್ಮನ್ನು ಹೊಸದೊಂದು ಲೋಕಕ್ಕೆ ಕಾಲಿರಿಸಿದಂತಹ ಅನುಭವವನ್ನು ಕಟ್ಟಿಕೊಡುತ್ತವೆ. ಹಾಗೇ ನಡೆದುಕೊಂಡು ಒಳಗೆ ಬಂದರೆ ಅಜ್ಜ-ಅಜ್ಜಿಯರ ಹಳ್ಳಿಮನೆಗಳಲ್ಲಿದ್ದ ನಿಮ್ಮ ಬಾಲ್ಯವನ್ನು ಮತ್ತೆ ಮರುಕಳಿಸುವಂತಹ ಶಿಲ್ಪಕಲಾಕೃತಿಗಳು ನಿಮ್ಮನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಹಳ್ಳಿ ಮನೆಯಲ್ಲಿ ತಾಯಿ ಮಗುವಿಗೆ ಸ್ನಾನ ಮಾಡಿಸುತ್ತಿರುವುದು, ಒಳ್ಳುಕಲ್ಲಿನಲ್ಲಿ ರುಬ್ಬುತ್ತಿರುವುದು, ಮೊರದಲ್ಲಿ ಧಾನ್ಯಗಳನ್ನು ಹಸಣು(ಸ್ವಚ್ಛ) ಮಾಡುತ್ತಿರುವುದು ಇನ್ನೂ ಅನೇಕ ರೀತಿಯ ಕಲಾಕೃತಿಗಳನ್ನು ನೀವು ಕಾಣಬಹುದು.


ಹಾಗೇ ನೇರವಾಗಿ ಮುಂದೆ ಬಂದರೆ ಆಡಳಿತ ಕಟ್ಟಡದ ಎದುರಲ್ಲಿ ಬಾನೆತ್ತರಕ್ಕೆ ನಿಂತಿರುವ ಶ್ರೇಷ್ಠ ವಚನಕಾರ್ತಿ ಅಕ್ಕಮಹಾದೇವಿಯು ಮಹಿಳೆಯ ಶ್ರೇಷ್ಠತೆಯನ್ನು ಮತ್ತು ಮಹಿಳೆಯ ಜೀವನದ ಸಾರ್ಥಕತೆಯನ್ನು ಸಾರುತ್ತಾಳೆ. ಅಕ್ಕಮಹಾದೇವಿ ಶಿಲ್ಪವನ್ನು ತಲೆ ಎತ್ತಿ ನೋಡಿದಾಗ ಅಕ್ಕಮಹಾದೇವಿಯು ನೆಲೆಸಿರುವ ಈ ಸ್ಥಳ ಕದಳಿ ವನ ಅಲ್ಲದೇ ಇರಬಹುದು. ಆದರೆ ಮಹಿಳಾ ಸಾಧಕರನ್ನೊಳಗೊಂಡಂತೆ ಎಲ್ಲ ಕಲಾಕೃತಿಗಳನ್ನು ಕಾಣಬಹುದಾಗಿದೆ. ಆದ್ದರಿಂದ ಇದು ವಿವಿಯ ಆವರಣದಲ್ಲಿ ನಿರ್ಮಾಣವಾದ ಮಹಿಳಾ ಸಾಧಕಿಯರ ಶ್ರೇಷ್ಠ ಸ್ಥಾನವಾಗಿದೆ ಎಂದರೆ ತಪ್ಪಾಗಲಾರದು. ಇದುವೇ ವಿವಿಯಲ್ಲಿ ಮೂಡಿರುವ ನವ ಶಿಲ್ಪೋದ್ಯಾನ.


ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಕಿತ್ತೂರು ರಾಣಿ ಚೆನ್ನಮ್ಮ, ಬಡವರ ಮತ್ತು ದೀನ-ದಲಿತರ ಪಾಲಿನ ಬಂಧು ಮದರ್ ತೆರೇಸಾ, ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಮತ್ತಿತರ ಮಹಿಳಾ ಸಾಧಕಿಯರ ಶಿಲ್ಪಗಳನ್ನು ನಾವಿಲ್ಲಿ ಕಾಣಬಹುದು.
ಈ ಶಿಲ್ಪ ಕಲಾಕೃತಿಗಳನ್ನು ಮಾಡುತ್ತಿರುವುದು ಹಾವೇರಿ ಮ್ತತು ಹುಬ್ಬಳ್ಳಿಯಲ್ಲಿರುವ ಉತ್ಸವ ರಾಕ್ ಗಾರ್ಡನ್‍ನ ಟೀಮ್. ಹುಬ್ಬಳ್ಳಿಯಲ್ಲಿ ಶಿಲ್ಪಗಳನ್ನು ಮಾಡಿ ಅಲ್ಲಿಂದ ಇಲ್ಲಿಗೆ ತಂದು ನಿಲ್ಲಿಸುತ್ತಾರೆ. ಈ ಶಿಲ್ಪೋದ್ಯಾನಕ್ಕಾಗಿ ಇವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಬರದ ನಾಡು ಎನ್ನುವ ವಿಜಯಪುರದಲ್ಲಿ ಈ ಮಹಿಳಾ ಸಾಧಕಿಯರ ಶಿಲ್ಪೋದ್ಯಾನವು ನೋಡುಗರ ಮನಸ್ಸಿಗೆ ಮುಂಗಾರಿನ ಮಳೆಯ ಆನಂದವನ್ನು ನೀಡುವುದಂತೂ ಸತ್ಯ. ನೀವು ಒಮ್ಮೆ ಬಂದು ಈ ಶಿಲ್ಪೋದ್ಯಾನಕ್ಕೆ ಭೇಟಿ ನೀಡಿ.

ದೀಪಾ ಮಂಜರಗಿ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ
.


Show More

Leave a Reply

Your email address will not be published. Required fields are marked *

Back to top button
error: Content is protected !!