ಕರ್ನಾಟಕಜಿಲ್ಲಾ

ಈ ಸೇತುವೆ ಬರೀ ಸೇತುವೆಯಲ್ಲ ಸಾಂಗ್ಲಿ ನಗರಕ್ಕೊಂದು ” ಎಚ್ಚರಿಕೆಯ ಗಂಟೆ”! ಪ್ರವಾಹದ ದಿಕ್ಕು ತೋರಿಸುವ ಬ್ರಿಟಿಷ್ ಕಾಲದ 91 ವರ್ಷದ ಆಯುರ್ವಿನ್ ಬ್ರಿಜ್!!

    

ಬೆಳಗಾವಿ :- ಮಹಾರಾಷ್ಟ್ರದ ಸಾಂಗ್ಲಿ ಮಹಾನಗರ ಬಹು ವೈಶಿಷ್ಟ್ಯಗಳುಳ್ಳ ಊರು.ಕನ್ನಡಿಗರು ಮತ್ತು ಮರಾಠಿಗರ ಮಧುರ ಬಾಂಧವ್ಯದ ಅನೇಕ ಮಹಾರಾಷ್ಟ್ರದ ನಗರಗಳ ಪೈಕಿ ಸಾಂಗ್ಲಿಯೂ ಒಂದು.ಇಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವದು ಸತ್ಯ. ಮನೆಯ ಭಾಷೆ ಕನ್ನಡವಾದರೂ ರಾಜ್ಯ ಭಾಷೆಯೊಂದಿಗೆ ಬೆರೆತು ಹೋಗಿದ್ದಾರೆ. ಕನ್ನಡಿಗರಿಗೆ ಮರಾಠಿಯೂ ಗೊತ್ತಿರುವಂತೆ ಇಲ್ಲಿಯ ಮರಾಠಿಗರಿಗೆ ಕನ್ನಡವೂ ಗೊತ್ತು.ನಿತ್ಯ ಬದುಕು,ವ್ಯವಹಾರಗಳಲ್ಲಿ ಉಭಯ ಭಾಷೆಗಳನ್ನು ಲೀಲಾಜಾಲವಾಗಿ ಬಳಸಲಾಗುತ್ತದೆ.


ಮಳೆ, ಪ್ರವಾಹ ಬಂದಾಗಲೊಮ್ಮೆ ಸಾಂಗ್ಲಿಯೂ ಸಾಕಷ್ಟು ದುಷ್ಪರಿಣಾಮಕ್ಕೆ ಒಳಗಾಗುತ್ತದೆ.ಕಳೆದ 2019 ರಲ್ಲಿ ನಗರದಲ್ಲಿ ಸಾಕಷ್ಟು ಪ್ರದೇಶಗಳು ಜಲಾವೃತ್ತಗೊಂಡು ಸಾಕಷ್ಟು ಹಾನಿಯಾಗಿತ್ತು.ನೂರಾರು ಜನರು ಮನೆಗಳನ್ನೇ ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ಹೋಗಿದ್ದರು.

ಇಲ್ಲೊಂದು 91 ವರ್ಷದಷ್ಟು ಹಳೆಯದಾದ 1929 ರಲ್ಲಿ ಸಾಂಗ್ಲಿ ಸಂಸ್ಥಾನಿಕರು,ಬ್ರಿಟಿಷರ ಆಳಿಕೆಯ ಕಾಲಕ್ಕೆ ನಿರ್ಮಿಸಿದ ಸೇತುವೆಯಿದೆ.ನಗರದಲ್ಲೇ ಇರುವ ಈ ಸೇತುವೆಗೆ ಹರಿದು ಬರುವ ಕೊಯ್ನಾ ಮತ್ತಿತರ ಜಲಾಶಯಗಳ ನೀರಿನ
ಮಟ್ಟ ನೋಡಿಯೇ ಸಾಂಗ್ಲಿ ನಗರದ ಪ್ರವಾಹ ಪರಿಸ್ಥಿತಿಯನ್ನು ತಿಳಿಯಬಹುದಾಗಿದೆ! ಉದಾಹರಣೆಗೆ ನಿನ್ನೆ ಅಗಷ್ಟ 17 ರಂದು ಸೇತುವೆಯ ನೀರಿನ ಮಟ್ಟ 34 ಅಡಿ 4 ಅಂಗುಲವಿತ್ತು.ಇದು 40 ಅಡಿ ತಲುಪಿದರೆ ಎಚ್ಚರಿಕೆ ಮಟ್ಟ,45 ಅಡಿ ಮುಟ್ಟಿದರೆ ಅಪಾಯದ ಮಟ್ಟ !
ಕಳೆದ ವರ್ಷ ನೀರಾವರಿ ಖಾತೆಯ ಅಧಿಕಾರಿಗಳು ಸಿದ್ಧಪಡಿಸಿದ ಅಂಕಿ ಸಂಖ್ಯೆ ಪ್ರಕಾರ 30 ಅಡಿಗೆ ನಗರದ ಸೂರ್ಯವಂಶಿ ಪ್ಲಾಟ್,31 ಕ್ಕೆ ಇನಾಮದಾರ ಪ್ಲಾಟ್,33 ಕ್ಕೆ ಶಿವಮಂದಿರ ಪರಿಸರ,48 ಕ್ಕೆ ಟಿಳಕಚೌಕ,ಮಾರುತಿ ನಗರ,ವೆಂಕಟೇಶನಗರ,ಇಂದ್ರಪ್ರಸ್ಥ,50 ಕ್ಕೆ ಧೋಬಿಘಾಟ,ಶಾಮರಾವ ನಗರ ರಸ್ತೆ.ಹೀಗೆ ಪ್ರತಿ ಅಡಿಯಷ್ಟು ಏರಿದಾಗಲೂ ನೆರೆಯ ನೀರು ಯಾವ ಪ್ರದೇಶವನ್ನು ಪ್ರವೇಶಿಸುತ್ತದೆ ಎಂದು ನಿಖರವಾಗಿ ವಿವರಿಸಲಾಗಿತ್ತು.


195 ಮೀಟರ್ ಉದ್ದದ ಈ ಸೇತುವೆಯು 15 ಮೀ.ಉದ್ದದ 13 ಕಮಾನುಗಳನ್ನು ಹೊಂದಿದೆ.ಹತ್ತು ಮೀ.ಅಗಲವಾಗಿದೆ. ಬ್ರಿಟಿಷ್ ಇಂಜನಿಯರ ಆಯುರ್ವಿನ್ ಎಂಬವರು ಇದನ್ನು ನಿರ್ಮಿಸಿದ್ದು ಅವರ ಹೆಸರನ್ನೇ ಇಡಲಾಗಿದೆ.ಈಗ ಈ ಸೇತುವೆಯ ಮೇಲೆ ಲಘು ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ.ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆಯನ್ನು ನಿರ್ಮಿಸಲಾಗಿದೆ.


ಸಂಸ್ಥಾನಿಕರ ಕಾಲದಲ್ಲಿ ಈ ಸೇತುವೆಯ ಮೇಲೆ ಸಂಚರಿಸುವ ದೊಡ್ಡ ವಾಹನಗಳಿಗೆ ನಾಲ್ಕಾಣೆ, ಸಣ್ಣ ವಾಹನಗಳಿಗೆ ಎರಡಾಣೆ ಟೋಲ್ ಸಂಗ್ರಹಿಸಲಾಗುತ್ತಿತ್ತು.


ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ.
ಮೊ: 9620114466

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!