ಆರೋಗ್ಯ

74 ವರ್ಷಗಳಲ್ಲಿ ಮೊದಲ ಬಾರಿ: ಕೆಂಪುಕೋಟೆ ಮೇಲೆ ಋತುಚಕ್ರದ ಬಗ್ಗೆ ಮೋದಿ ಮಾತು

ಸ್ಪೇಷಲ್ ಸ್ಟೋರಿ- ಹೆಣ್ಣಿನ ಜೀವನದ ಅವಿಭಾಜ್ಯ ಅಂಗವಾಗಿರುವ ಮುಟ್ಟಿನ ವಿಷಯ ಮನಮುಟ್ಟುವ ವಿಷಯವಾಗಿ ಬದಲಾಗಿರುವುದು ಸಂತಸ. ಜಾಗತಿಕ ದಿನಮಾನಗಳು ಬದಲಾಗುತ್ತಿದ್ದಂತೆ ಈ ಮುಟ್ಟಿನ ಕುರಿತಾಗಿ ಇದ್ದ ಅಭಿಪ್ರಾಯಗಳು ಬದಲಾಗುತ್ತಿದೆ. ಇನ್ನು 74ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮುಟ್ಟಿನ ಕುರಿತು ಮಾತನಾಡಿದ್ದಾರೆ. ಇದು ಮಹಿಳೆಯರಿಗೆ ನೀಡಿದ ಗೌರವವೆಂದೇ ಹೇಳಬಹುದು.

ಆಗಸ್ಟ್​ 15ರಂದು ಕೆಂಪುಕೋಟೆಯ ಮೇಲೆ ನಿಂತು ಸತತ 7ನೇ ಬಾರಿ ದೇಶದ ಕೀರ್ತಿ ಪತಾಕೆ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಿ ಭಾಷಣ ಮಾಡಿದ ಪ್ರಧಾನಿ ಭಾರತದ ಬಡ ಹೆಣ್ಣುಮಕ್ಕಳಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್​ಗಳನ್ನು ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ವಿತರಿಸಲಾಗುವುದು. ಅಷ್ಟೇ ಅಲ್ಲದೆ, 6000ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ 1 ರೂ.ಗೆ ಪ್ಯಾಡ್​ಗಳನ್ನು ವಿತರಣೆ ಮಾಡಲಾಗುತ್ತದೆ. ಈ ಯೋಜನೆಯ ಸದುಪಯೋಗ ಸುಮಾರು 5 ಕೋಟಿಗೂ ಹೆಚ್ಚು ಮಹಿಳೆಯರಿಗೆ ತಲುಪಲಿದೆ ಎಂದು ಹೇಳಿದ್ದಾರೆ.

ಋತುಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ ಪ್ರಧಾನಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾರಣ 74 ವರ್ಷಗಳ ಬಳಿಕ ಮೊದಲ ಬಾರಿ ದೇಶದ ಪ್ರಧಾನಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರಧಾನಿ ಹೇಳಿಕೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದು, ಬಾಲಿವುಡ್​ನ “ಪ್ಯಾಡ್​ಮ್ಯಾನ್”​ ಚಿತ್ರದಲ್ಲಿ ನಟಿಸಿದ ನಟ ಅಕ್ಷಯ್​ ಕುಮಾರ್​ರವರು ಟ್ವೀಟ್​ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಆದರೆ ಒಂದು ಜೀವ ಸೃಷ್ಟಿಸಲು ಸಾಮರ್ಥ್ಯ ನೀಡುವ ಮುಟ್ಟಿಗೆ ಈಗಲೂ ಮೂಢನಂಬಿಕೆಯ ಹಣೆಪಟ್ಟಿಯಿದೆ ಎಂದರೆ ಅದು ವಿಪರ್ಯಾಸ. ಅದನ್ನು ತೊಲಗಿಸಬೇಕು ಎಂದು ಅನೇಕ ಸಿನಿಮಾಗಳು, ಸಾಕ್ಷ್ಯಚಿತ್ರಗಳು, ಮಾಧ್ಯಮಗಳ ಮೂಲಕ ವಿಶೇಷ ಕಾರ್ಯಕ್ರಮಗಳು ಬಂದಿವೆ. ಇನ್ನು ಮುಟ್ಟಿನ ಸಂದರ್ಭದಲ್ಲಿ ಕಾಪಾಡಿಕೊಳ್ಳಬೇಕಾದ ಸ್ವಚ್ಛತೆ ಬಗ್ಗೆ ಕೆಲ ಮಹಿಳೆಯರು ಇಂದಿಗೂ ಹಿಂದೆ ಬಿದ್ದಿದ್ದಾರೆ. ಗ್ರಾಮೀಣ ಪ್ರದೇಶ ಮಾತ್ರವಲ್ಲ ನಗರವಾಸಿಗಳೂ ಸಹ ಇದರಿಂದ ಹೊರತಾಗಿಲ್ಲ. ಕೆಲ ಭಾಗಗಳಲ್ಲಿ ಈ ಮುಟ್ಟಿನ ಸಂದರ್ಭದಲ್ಲಿ ಕೊಳಕು ಬಟ್ಟೆಗಳನ್ನು ಬಳಸುವುದು, ಆರೋಗ್ಯದ ಕಡೆ ಗಮನ ಹರಿಸದಿರುವುದು ಆಘಾತಕಾರಿ ಅಂಶವೆಂದೆ ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಋತುಮತಿಯಾದಾಗ ಮೈಲಿಗೆ ಎಂಬ ಪದ್ಧತಿ ಹಿಂದೆ ಸರಿಯುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಋತಮತಿಯಾದ ಹೆಣ್ಣಿಗೆ ಕೆಲಸದಿಂದ ಮುಕ್ತಿ ನೀಡಿ, ಆಕೆಯ ಆರೈಕೆಗೆಂದು ಉತ್ತಮ ಆಹಾರ, ಸ್ವಚ್ಛ ಉಡುಪುಗಳನ್ನು ನೀಡಲಾಗುತ್ತಿದೆ.

ಋತುಮತಿ ಪ್ರಕ್ರಿಯೆ ಎಂದರೆ ಗರ್ಭಕೋಶದ ಒಳಪದರವು ಬೆಳದು ಸಂತಾನೋತ್ಪತ್ತಿ ಕ್ರಿಯೆ ನಡೆಯದಿದ್ದಲ್ಲಿ ಗರ್ಭಾಶಯದ ಒಳಪದರ ಕಳಚಲ್ಪಟ್ಟು, ಯೋನಿಯ ಮುಖೇನ ರಕ್ತಸ್ರಾವವಾಗುವುದು. ಇನ್ನು ಋತುಚಕ್ರದ ಸಂದರ್ಭದಲ್ಲಿ ಕೆಟ್ಟ ರಕ್ತ ಹೊರಹೋಗುವುದು ಎಂಬ ಅರೆಜ್ಞಾನ ಕೆಲವರಿಗಿದೆ. ಆದರೆ ಅದು ತಪ್ಪು ಮಾಹಿತಿ. ಅಷ್ಟೇ ಅಲ್ಲದೆ, ಕೊರೊನಾ ಜಾಗತಿಕ ಮಟ್ಟದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಈ ಸಂದರ್ಭದಲ್ಲಿ ಮಾಸಿಕ ಮುಟ್ಟಿನ ಬಗ್ಗೆ ಜಾಗೃತಿ ವಹಿಸಬೇಕು ಎಂದು ಯುನಿಸೆಫ್​ ಹೇಳಿದೆ.

ಋತುಚಕ್ರದ ಕುರಿತು ಹ್ಯಾಪಿ ಟು ಬ್ಲೀಡ್​ ಎಂಬ ಅಭಿಯಾನವೊಂದು ಪ್ರಾರಂಭವಾಗಿತ್ತು. ಈ ಮೂಲಕ ಮುಟ್ಟಿನ ಸಂದರ್ಭದದಲ್ಲಿದ್ದ ಕೆಲ ಅಭಿಪ್ರಾಯಗಳು ದೂರಸರಿದಿದೆ.

Show More

Leave a Reply

Your email address will not be published. Required fields are marked *

Back to top button
error: Content is protected !!