ಲಾಕ್ ಡೌನ್ ಸಂದರ್ಭದಲ್ಲಿ ಆಸರೆಯಾದ ಕೈತೋಟದ ತರಕಾರಿ- ಸರಳ ಬದುಕಿಗೆ ಭಂಗವಿಲ್ಲ.!

ಲೇಖನ ವಿನೋದ ಪಾಟೀಲ್-
ಬದುಕು ಬದಲಾಗಿದೆ ದುರಿತಕಾಲದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ಹಲವು ಉದ್ಯಮಗಳಿಗೆ ಆರ್ಥಿಕ ಸಂಕಷ್ಟ ಎದರಾಗಿದೆ. ಕೃಷಿಯ ಆದಾಯಕ್ಕೂ ಪೆಟ್ಟು ಬಿದ್ದಿದೆ. ಆದರೆ ಆತನ ಸರಳ ಬದುಕಿಗೆ ಯಾವುದೇ ಭಂಗಬಂದಿಲ್ಲ. ಹಿಂದಿನ ಕಾಲದಲ್ಲಿ ಆತ ಎಲ್ಲವನ್ನು ಖರೀದಿ ಮಾಡಿಕೊಂಡೇ ಬದುಕಿರಲಿಲ್ಲ. ತನಗೆ ಬೇಕಾದಷ್ಟನ್ನು ಬೆಳೆದುಕೊಂಡು ಬದಕನ್ನು ಸಾಗಿಸುತ್ತಿದ್ದ. ಇಂದು ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ಗೋವಿನಜೋಳದಂತಹ ಬೆಳೆಗಳ ಪ್ರಭಾವದಿಂದ ತನ್ನ ಜಮೀನಿಂದ ಬಹುಬೆಳೆ ಪದ್ದತಿ ನಾಶವಾಗಿ ಸುಸ್ಥಿರ ಬದುಕು ಬದಲಾಗಿತ್ತು. ಆದರೆ ಇಂದು ಸಂತೆಗಳು ನಿಂತೂ ಹೋಗಿ ತರಕಾರಿಗಳನ್ನು ತಾನೇ ಬೆಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತಾನು ಕಳೆದುಕೊಂಡ ಸರಳ ಬದುಕು ಮತ್ತೇ ಪಡೆದುಕೊಳ್ಳುವಲ್ಲಿ ಕಾಲ ಸಹಾಯ ಮಾಡಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತ ಸುಭಾಷ್ ಶಿವಗುಂಡಪ್ಪ ಪಡೆಣ್ಣವರ ಎಂಬ 2 ಗುಂಟೆಯಲ್ಲಿನ ದೇಶಿ ಬೀಜಗಳಿಂದ ತಯಾರಿಸಿದ ಕೈತೋಟ ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿಯ ಬಗ್ಗೆ ಆಸಕ್ತಿಯಿರುವ ಇವರು 10 ಏಕರೆ ಭೂಮಿಯನ್ನು ಹೊಂದಿದ್ದಾರೆ. ಇಲ್ಲಿ ಸೋಯಾ, ಶೇಂಗಾ, ಜೋಳವನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ. ಇದರ ಜೊತೆಗೆ ವಿಷರಹಿತ ಆಹಾರವನ್ನು ಅಡುಗೆ ಮನೆಗೆ ತರುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.ಮನೆಯ ಮುಂದಿನ 2 ಗುಂಟೆಯ ಜಾಗೆಯಲ್ಲಿ ಬಳ್ಳಿ ತರಕಾರಿಗಳಾದ ಹೀರೆ, ಸವತೆ, ಹಾಗಲ, ಅವರೆಯಿದ್ದರೆ. ಸೊಪ್ಪುಗಳಾದ ಮೆಂತ್ಯ, ಸಬ್ಬಸಿಗೆ, ಕೊತಂಬರಿ, ಇನ್ನೂ ಬೆಂಡೆ, ಬದನೆ, ಮೆಣಸಿಕಾಯಿ ಹೀಗೆ ಹತ್ತು ಹಲವು ವೈವಿಧ್ಯಮಯ ತರಕಾರಿಗಳನ್ನು ಬೆಳೆದಿದ್ದಾರೆ.
ವಿಶೇಷವೆಂದರೆ ಎಲ್ಲವೂ ದೇಶಿ ಬಿಜಗಳಿಂದ ತಯಾರಿಸಿದ ತರಕಾರಿಯಾಗಿವೆ. ಕೋವಿಡ್ ಕಾಲದಲ್ಲಿ ತಾವೇ ಬೆಳೆದ ತರಕಾರಿಗಳು ಇವರಿಗೆ ವರದಾನವಗಿವೆ. ಇದರ ಜೊತೆಗೆ ಸುತ್ತಮುತ್ತಲಿನ ರೈತರಿಗೂ ಇಲ್ಲಿಯ ತರಕಾರಿಗಳನ್ನು ಕೊಡುವದರಿಂದ ಪರಸ್ಪರರಲ್ಲಿ ಸಹಕಾರ ಗುಣ ನಿರ್ಮಾಣವಾಗಿದೆ. ಇಲ್ಲಿಯ ತರಕಾರಿಗಳಿಗೆ ಯಾವುದೇತರಹದ ಕ್ರಿಮಿನಾಶಕಗಳನ್ನು ಬಳಸದೇ ಮನೆಮದ್ದುಗಳಾದ ಬೇವಿನ ಕಷಾಯದಂತಹ ಔಷಧಗಳನ್ನು ಸಿಂಪಡಿಸಿದ್ದಾರೆ. ಏಳು ದಿನದಿಂದ ೪೫ ದಿನದವೆರೆಗೂ ಬರುವ ಬೆಳೆಗಳನ್ನು ಬೆಳೆವುದರಿಂದ ಹಂತಹಂತವಾಗಿ ವಿವಿಧ ತರಕಾರಿಗಳು ಇವರಿಗೆ ಲಭ್ಯವಾಗಿವೆ.ಬೆಳೆಗಳಿಗೆ ಇವರು ಕೊಟ್ಟಿಗೆ ಗೊಬ್ಬರವನ್ನು ಬಳಸಿ ಭೂಮಿಯ ಹದಮಾಡಿಕೊಂಡು ನಾಟಿ ಮಾಡುವದರಿಂದ ಬೆಳೆಗಳು ಇ ಉತ್ತಮ ಇಳುವರಿಯನ್ನು ನೀಡಿವೆ.